ಕ್ಲಾರ್ಕ್, ಜಾನ್ ಮಾರಿಸ್		
1884-1963. ಅಮೆರಿಕನ್ ಅರ್ಥಶಾಸ್ತ್ರಜ್ಞ ಅಮೆರಿಕನ್ ಎಕನಾಮಿಕ್ ಅಸೋಸಿಯೇಷನಿನ ಮೂವತ್ತೇಳನೆಯ ಅಧ್ಯಕ್ಷ. ಮ್ಯಾಸಚೂಸೆಟ್ಸ್‍ನ ನಾರ್ತಾಂಪ್ಟನಿನಲ್ಲಿ 1884ರಲ್ಲಿ ಜನಿಸಿದ. ಜೆ.ಎಸ್ ಮಿಲ್ ಮತ್ತು ಜೆ.ಎಂ.ಕೇನ್ಸರ ಹಾಗೆ ಜಾನ್ ಮಾರಿಸ್ ಕ್ಲಾರ್ಕನೂ ಅರ್ಥಶಾಸ್ತ್ರಜ್ಞನ ಮಗ. ಇವನ ತಂದೆ ಜೆ.ಬಿ. ಕ್ಲಾರ್ಕ್. (ನೋಡಿ- ಕ್ಲಾರ್ಕ್,-ಜಾನ್-ಬೇಟ್ಸ್). ಆಮ್‍ಅಸ್ರ್ಟ್ ಕಾಲೇಜಿನಲ್ಲಿ ಓದಿ 1905ರಲ್ಲಿ ಬಿ.ಎ. ಪದವಿ ಗಳಿಸಿದ ಅನಂತರ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಾಭ್ಯಾಸ ಮುಂದುವರಿಸಿ ಎಂ.ಎ (1906) ಮತ್ತು ಪಿಎಚ್.ಡಿ(1910) ಪಡೆದ. ಈತ ಕಾಲೊರಾಡೋ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸಮಾಜಶಾಶ್ತ್ರಗಳಲ್ಲಿ ಬೋಧಕನಾದ್ದು 1908ರಲ್ಲಿ ಅರ್ಥಶಾಸ್ತ್ರದ ಸಹಪ್ರಾಧ್ಯಾಪಕನಾಗಿ ಈತ ಆಮ್‍ಅಸ್ರ್ಟ್ ಕಾಲೇಜಿಗೆ ಹಿಂದಿರುಗಿದ್ದ 1910ರಲ್ಲಿ. 1915ರಲ್ಲಿ ಈತ ಷಿಕಾಗೋ ವಿಶ್ವವಿದ್ಯಾಲಯ ಸೇರಿದ. 1926ರಲ್ಲಿ ಅಲ್ಲಿಂದ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಬಂದು ಅರ್ಥಶಾಸ್ತ್ರದ ಪ್ರಾಧ್ಯಾಪಕನಾದ. ಆ ಸ್ಥಾನದಿಂದ ಕ್ಲಾರ್ಕ್ ನಿವೃತ್ತಿ ಹೊಂದಿದ್ದು 1957ರಲ್ಲಿ. ಹೀಗೆ ಐವತ್ತು ವರ್ಷಕಾಲ ಈತ ಸತತವಾಗಿ ಕ್ರಿಯಾತ್ಮಕ ಚಿಂತನೆ ಬೋಧನೆಗಳಲ್ಲಿ ನಿರತನಾಗಿ ಸಾರ್ಥಕ ಜೀವನ ನಡೆಸಿದ. ಅನೇಕ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಬರೆದು ತನ್ನ ಸಮಕಾಲೀನ ಆರ್ಥಿಕ ಚಿಂತನೆಯಲ್ಲಿ ಭಾಗವಹಿಸಿದ್ದಲ್ಲದೆ ಅನೇಕ ಪುಸ್ತಕಗಳನ್ನೂ ಪ್ರಕಟಿಸಿದ. ಸ್ಟಡೀಸ್ ಇನ್ ದಿ ಎಕನಾಮಿಕ್ಸ್ ಆಫ್ ಓವರ್ ಹೆಸ್ ಕಾಸ್ಟ್ಸ್ (1923), ಸ್ಟ್ರಾಟೆಜಿಕ್ ಫ್ಯಾಕ್ಟರ್ಸ್ ಇನ್ ಬಿಸನೆಸ್ ಸೈಕಲ್ಸ್ (1934), ದಿ ಎಕನಾಮಿಕ್ಸ್ ಆಫ್ ಪ್ಲಾನಿಂಗ್ ಪಬ್ಲಿಕ್ ವಕ್ರ್ಸ್ (1934), ಪ್ರಿಫೇಸ್ ಟು ಸೋಷಿಯಲ್ ಎಕನಾಮಿಕ್ಸ್(1936) ಮುಂತಾದ ಅನೇಕ ಪುಸ್ತಕಗಳನ್ನು ಈತ ಬರೆದಿದ್ದಾನೆ. ಕ್ಲಾರ್ಕ್ ತೀರಿಕೊಂಡದ್ದು 1963ರಲ್ಲಿ. 

1920 ಮತ್ತು 1930ರ ದಶಕಗಳು ಮೌಲ್ಯ ಹಾಗೂ ಆರ್ಥಿಕ ಆವರ್ತ ಸಿದ್ಧಾಂತಗಳು ರೂಪಿತವಾಗುತ್ತಿದ್ದ ಕಾಲ. ಈ ಅವಧಿಯ ಆರ್ಥಿಕ ಚಿಂತನೆಯಲ್ಲಿ ಪಾಲುಗೊಂಡಿದ್ದ ಕ್ಲಾರ್ಕ್ ಈ ಎರಡೂ ಕ್ಷೇತ್ರಗಳಿಗೂ ಮೂಲಭೂತ ಕಾಣಿಕೆ ಸಲ್ಲಿಸಿದ್ದಾನೆ.

ಆರ್ಥಿಕ ಆವರ್ತಗಳ ಆಧುನಿಕ ಮೀಮಾಂಸೆಯ ಆಧಾರಸ್ತಂಭಗಳೆನಿಸಿದ ಗುಣಕ ಮತ್ತು ವೇಗೋತ್ಕರ್ಷ ನಿಯಮಗಳನ್ನು ಪರಿಪೂರ್ಣಗೊಳಿಸಿದವರಲ್ಲಿ ಕ್ಲಾರ್ಕ್‍ನೂ ಒಬ್ಬ. ಆರ್ಥಿಕತೆಯ ಕ್ರಯಶಕ್ತಿಯಲ್ಲಿ ಸಂಭವಿಸುವ ಏರಿಕೆಗೆ ಹಲವು ಮಡಿಯಾಗಿ ಆದಾಯ ಅಧಿಕವಾಗುತ್ತದೆಯೆಂಬುದನ್ನು ಗುಣಕ ನಿಯಮ ವಿವರಿಸುತ್ತದೆ. ವಿಶ್ವದ ಮಹಾ ಆರ್ಥಿಕ ಕುಸಿತದ ಕಾಲದಲ್ಲಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಸರ್ಕಾರ ಕೈಗೊಂಡ ನೆರವು ನೀಡಿಕೆ ನೀತಿಯ ಪರಿಣಾಮ ಈ ನಿಯಮಕ್ಕನುಗುಣವಾಗಿಲ್ಲದಿದ್ದಾಗ ಕ್ಲಾರ್ಕನೂ ಇನ್ನೊಬ್ಬ ಅರ್ಥಶಾಸ್ತ್ರಜ್ಞ ಕಾನನೂ ಇದಕ್ಕೆ ಕಾರಣಗಳನ್ನು ವಿವರಿಸಿದರು. ಆರ್ಥಿಕ ನೆರವು ಪಡೆದವರು ಅದರ ಒಂದು ಭಾಗವನ್ನು ಸಾಲ ತೀರಿಸುವುದಕ್ಕೂ ಆಮದು ಮಾಡಿಕೊಂಡ ವಸ್ತುಗಳಿಗಾಗಿ ಹಣ ಸಲ್ಲಿಸುವುದಕ್ಕೂ ಬಳಸುವುದರಿಂದ ಕ್ರಯಶಕ್ತಿ ಸೋರಿಹೋಗುವುದೇ ಇದಕ್ಕೆ ಕಾರಣ ಎಂಬುದನ್ನು ತೋರಿಸಿಕೊಟ್ಟರು. ವೇಗೋತ್ಕರ್ಷ ನಿಯಮವನ್ನು ಪ್ರತಿಪಾದಿಸಿದವನು ಜೆ.ಎಂ. ಕ್ಲಾರ್ಕ್ ಅಲ್ಲವಾದರೂ ಅವನು ಅದನ್ನು ಬೆಳೆಸಿ ಪರಿಪೂರ್ಣಗೊಳಿಸಿದನೆಂದು ಪರಿಗಣಿತನಾಗಿದ್ದಾನೆ. ಅನುಭೋಗ ಸರಕುಗಳ ಬೇಡಿಕೆಗಿಂತ ಉತ್ಪಾದಕ ಸರಕುಗಳ ಬೇಡಿಕೆ ಹೆಚ್ಚು ತೀವ್ರವಾಗಿ ಏರಿಳಿಯುವುದೆಂಬುದನ್ನು ಜೆ.ಎಂ. ಕ್ಲಾರ್ಕ್ ವಿಶದಗೊಳಿಸುತ್ತ, ಪ್ರಾಸಂಗಿಕವಾಗಿ ಈ ಎರಡೂ ಬಗೆಯ ಬೇಡಿಕೆಗಳ ನಡುವಣ ಸಂಬಂಧವನ್ನು ಸ್ಥಾಪಿಸುವ ವೇಗೋತ್ಕರ್ಷ ನಿಯಮವನ್ನು ಪರಿಪೂರ್ಣಗೊಳಿಸಿದ. ಉತ್ಪಾದಕ ಸರಕುಗಳಲ್ಲಿ ಹೆಚ್ಚಿನ ಏರಿಳಿತಗಳಾಗಲು ಕಾರಣವಿಷ್ಟೆ; ಒಮ್ಮೆ ತಯಾರಾದ ಉತ್ಪಾದಕ ಸರಕುಗಳು, ದೀರ್ಘಕಾಲ ಬಳಕೆಯಲ್ಲಿರುತ್ತವೆ. ಆದ್ದರಿಂದ ಅನಂತರ ಆ ಕ್ಷೇತ್ರದಲ್ಲಿ ಬೇಡಿಕೆ ಇರುವುದು ಅವುಗಳ ಪುರಸ್ಸ್ಥಾಪನದ ಅಗತ್ಯ ದೃಷ್ಟಿಯಿಂದ ಮಾತ್ರ; ಅಷ್ಟಕ್ಕೆ ಮಾತ್ರ ಅವುಗಳ ಉತ್ಪಾದನೆ ಪರಿಮಿತವಾಗಿರುತ್ತದೆ. ಆದರೆ ಯಾವುದೇ ವರ್ಷದಲ್ಲಿ ಅನುಭೋಗ ಸರಕುಗಳ ಬೇಡಿಕೆಯಲ್ಲಿ ಏರಿಳಿತಗಳುಂಟಾದರೆ ಉತ್ಪಾದಕ ವಸ್ತುಗಳ ಬೇಡಿಕೆಯ ಮೇಲುಂಟಾಗುವ ಪರಿಣಾಮ ಗುಣಕರೂಪದ್ದು. ಅನುಭೋಗ ಸರಕುಗಳ ಉತ್ಪಾದಕರು ಸರಕುಗಳಿಗೆ(ಉದಾಹರಣೆ: ಯಂತ್ರ ಇತ್ಯಾದಿ) ಬೇಡಿಕೆ ನಿಲ್ಲಿಸುತ್ತಾರೆ. ಉತ್ಪಾದಕ ಸರಕುಗಳ ಪುನಸ್ಸ್ಥಾಪನ ಕಾರ್ಯವನ್ನು ಮುಂತಳ್ಳುತ್ತಾರೆ. ಆದ್ದರಿಂದ ಉತ್ಪಾದಕ ಸರಕು ಕೈಗಾರಿಕೆಗಳಲ್ಲಿ ಉತ್ಪಾದನೆ, ಉದ್ಯೋಗ, ಆದಾಯಗಳು ಅತಿಯಾದ ಏರಿಳಿತಗಳಿಗೆ ಒಳಗಾಗಿ ಆರ್ಥಿಕ ಆವರ್ತಗಳನ್ನು ತೀವ್ರಗೊಳಿಸುತ್ತವೆ-ಎಂದು ಕ್ಲಾರ್ಕ್ ವಾದಿಸಿದ್ದಾನೆ.

ಚೇಂಬರ್ಲಿನ್ ಎಂಬ ಅರ್ಥಶಾಸ್ತ್ರಜ್ಞ: ಏಕಸ್ವಾಮ್ಯ ಸ್ಪರ್ಧೆಯ ಪರಿಸ್ಥಿತಿಯಲ್ಲಿ ದೀರ್ಘಾವಧಿ ಬೆಲೆ ನಿರ್ಧಾರದ ಬಗ್ಗೆ ಬರೆಯುತ್ತ, ಜಾಹೀರಾತು ಮುಂತಾದ ವೆಚ್ಚಗಳಿಂದಾಗಿ ಉತ್ಪಾದನೆಯ ಸರಾಸರಿ ವೆಚ್ಚರೇಖೆ ಕಡಿದಾಗಿರುತ್ತದೆ ಹಾಗೂ ಪದಾರ್ಥದ ಅತಿಯಾದ ಭಿನ್ನತೆಯ ಕಾರಣ ಸರಾಸರಿ ಹುಟ್ಟುವಳಿ ಅಥವಾ ಬೇಡಿಕೆಯ ರೇಖೆ ಕೂಡ ಕಡಿದಾಗಿರುತ್ತದೆ ಎಂದು ಸಾಧಿಸಿ ತೋರಿಸಿದ್ದ. ಆದಕಾರಣ ಈ ಸನ್ನಿವೇಶದಲ್ಲಿ ಉತ್ಪಾದನೆಯ ಮಟ್ಟ ಪರಿಪೂರ್ಣ ಸ್ಪರ್ಧೆಯಲ್ಲಿಯ ಮಟ್ಟಕ್ಕಿಂತ ಕಡಿಮೆ ಇದ್ದರೂ ಬೆಲೆ ಹೆಚ್ಚಾಗಿರುತ್ತದೆ. ಆದ್ದರಿಂದ ಏಕಸ್ವಾಮ್ಯ ಸ್ಪರ್ಧೆಯ ಸ್ಥಿತಿಯ ಕಾರ್ಯದಕ್ಷತೆ ಪರಿಪೂರ್ಣ ಸ್ಪರ್ಧೆಯ ಸ್ಥಿತಿಯದಕ್ಕಿಂತ ಕಡಿಮೆಯದು ಎಂಬುದು ಜೇಂಬರ್ಲಿನನ ಅಭಿಪ್ರಾಯ. ಕ್ಲಾರ್ಕ್ ಈ ಅಭಿಪ್ರಾಯವನ್ನು ವಿಮರ್ಶಿಸುತ್ತ, ಉತ್ಪಾದನ ವೆಚ್ಚ ಹಾಗೂ ಬೆಲೆನಿರ್ಧಾರ ಕ್ಷೇತ್ರಗಳಿಗೆ ಒಂದು ಅಮೂಲ್ಯವಾದ ಕೊಡುಗೆಯನ್ನಿತ್ತ. ಚೇಂಬರ್ಲಿನ್ ಉಪಯೋಗಿಸಿರುವ ರೇಖೆಗಳ ಅತಿಯಾದ ಕಡಿದುಗುಣದಿಂದಾಗಿ ಅವನು ಆ ಬಗೆಯ ತೀರ್ಮಾನಕ್ಕೆ ಬಂದಿದ್ದಾನೆ. ಆದರೆ ಸರಾಸರಿ ಹುಟ್ಟುವಳಿ (ಬೇಡಿಕೆ) ಹಾಗೂ ಸರಾಸರಿ ವೆಚ್ಚದ ರೇಖೆಗಳು ದೀರ್ಘಾವಧಿಯಲ್ಲಿ ಅಷ್ಟು ಕಡಿದಾಗಿರುವುದಿಲ್ಲ. ಏಕಸ್ವಾಮ್ಯ ಪರಿಸ್ಥಿತಿಯಲ್ಲೂ ದೀರ್ಘಾವಧಿಯಲ್ಲಿ ಸ್ಪರ್ಧೆ ಉಂಟಾಗುವ ಸಂಭವವಿರುತ್ತದೆ. ಅಲ್ಲದೆ ಪ್ರತಿನಿಧಾನ ಪದಾರ್ಥಗಳು ಮಾರುಕಟ್ಟೆಗೆ ಬರುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ಬೇಡಿಕೆ ರೇಖೆಗೆ ಅಧಿಕ ಪ್ರಮಾಣದ ಸ್ಥಿತಿಸ್ಥಾಪಕತ್ವ ಉಂಟಾಗಿ ಅದು ಮಟ್ಟಸವಾಗಿರುತ್ತದೆ. ದೀರ್ಘಾವಧಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಉದ್ಯಮ ಸಂಸ್ಥೆಯ ವಿಸ್ತರಣದಿಂದಲೇ ಹೊರತು ಇರುವ ಸೌಲಭ್ಯಗಳನ್ನೇ ತೀವ್ರವಾಗಿ ಬಳಸಿಕೊಳ್ಳುವುದರಿಂದಲ್ಲ. ಈ ಕಾರಣದಿಂದಾಗಿ ಸ್ಥಿರ ಮೇಲುವೆಚ್ಚವೂ ಬದಲಾಗುತ್ತಿರುತ್ತದೆ-ಎಂಬುದನ್ನು ಕ್ಲಾರ್ಕ್ ತೋರಿಸಿಕೊಟ್ಟು, ಸರಾಸರಿ ವೆಚ್ಚರೇಖೆ ದೀರ್ಘಾವಧಿಯಲ್ಲಿ ಕಡಿದಾಗಿರದೆ ಮಟ್ಟಸವಾಗಿರುತ್ತದೆಯೆಂಬುದನ್ನು ಸಾಧಿಸಿ ತೋರಿಸಿದ. ಬೇಡಿಕೆ ಮತ್ತು ಸರಾಸರಿ ವೆಚ್ಚರೇಖೆಗಳು ಮಟ್ಟಸವಾಗಿದ್ದಾಗ ಅವು ಪರಸ್ಪರ ಸ್ಪರ್ಶಿಸುವ ಬಿಂದುವಿನಲ್ಲಿಯ ಸಮತೋಲ ಉತ್ಪನ್ನ ಮೊತ್ತ, ಈ ರೇಖೆಗಳು ಕಡಿದಾಗಿದ್ದಾಗಿನ ಪರಿಸ್ಥಿತಿಯಲ್ಲಿಯ ಸಮತೋಲ ಉತ್ಪನ್ನ ಮೊತ್ತಕ್ಕಿಂತ ಸಹಜವಾಗಿಯೇ ಅಧಿಕವಾಗಿರುತ್ತದೆ. ಆದ್ದರಿಂದ ಏಕಸ್ವಾಮ್ಯ ಸ್ಪರ್ಧಾಸ್ಥಿತಿಯಲ್ಲಿರುವ ಉತ್ಪಾದನೆಯ ಕಾರ್ಯದಕ್ಷತೆ ಚೇಂಬರ್ಲಿನ್ ತೋರಿಸಿರುವಷ್ಟು ಕೀಳಲ್ಲ. ಅದು ದೀರ್ಘಾವಧಿಯಲ್ಲಿ ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯ ಕಾರ್ಯದಕ್ಷತೆಗೆ ಸಮೀಪವಾಗಿರುತ್ತದೆ ಎಂಬುದು ಕ್ಲಾರ್ಕ್ ಅಭಿಪ್ರಾಯ.

ಕ್ಲಾರ್ಕ್ ತನ್ನ ಜೀವಮಾನ ಕಾಲದಲ್ಲಿ ಪ್ರಮುಖವಾಗಿದ್ದ ಎಲ್ಲ ಆರ್ಥಿಕ ಸಮಸ್ಯೆಗಳ ಮೇಲೂ ಬರೆದಿದ್ದಾನೆ. ಸ್ಥಿತಿಶಾಸ್ತ್ರದ ಅಮೂರ್ತೀಕರಣಕ್ಕೂ ಗತಿಶಾಸ್ತ್ರದ ವಾಸ್ತವತೆಗೂ ಇದ್ದ ಅಂತರವನ್ನು ನಿವಾರಿಸುವತ್ತ ವಿಶೇಷವಾಗಿ ಗಮನ ಹರಿಸಿದ್ದಾನೆಂದು ಅವನು ಪ್ರಸಿದ್ಧನಾಗಿದ್ದಾನಾದರೂ, ವ್ಯಾಪಾರ ಆವರ್ತ, ಯುದ್ಧದ ಆರ್ಥಿಕ ವೆಚ್ಚ, ಯುದ್ಧ ಕಾಲದ ನಿಯಂತ್ರಣಗಳು, ಕಾರ್ಮಿಕ ಮಾರುಕಟ್ಟೆ, ಶಿಕ್ಷಣ ಮುಂತಾದ ಅನೇಕ ವಿಷಯಗಳ ಮೇಲೆ ಲೇಖನ ಬರೆದಿದ್ದಾನೆ. ಲೇಖನಗಳ ಬಾಹುಳ್ಯ, ಗುಣ ಎರಡು ದೃಷ್ಟಿಗಳಿಂದಲೂ ಕ್ಲಾರ್ಕ್ ಉನ್ನತ ಸ್ಥಾನ ಗಳಿಸಿದ್ದಾನೆ. ಸ್ವಕ್ಷೇತ್ರದಲ್ಲಿಯ ಎಲ್ಲ ಹಿರಿಯ ಮರ್ಯಾದೆಗಳೂ ಅವನಿಗೆ ಲಭ್ಯವಾದುವು. ಅನೇಕ ವಿಶ್ವವಿದ್ಯಾಲಯಗಳು ಕ್ಲಾರ್ಕನಿಗೆ ಗೌರವ ಪದವಿಗಳನ್ನು ನೀಡಿದುವು. ಅವನು ವಿಶಿಷ್ಟವಾದ ಯಾವ ಆರ್ಥಿಕ ಪಂಥದ ಸ್ಥಾಪಕನೂ ಅಲ್ಲ. ಆದರೂ ಬಹು ದೊಡ್ಡ ವಿದ್ವಾಂಸನೆಂದು ಅಪಾರವಾದ ಕೀರ್ತಿ ಗಳಿಸಿದ ಅರ್ಥಶಾಸ್ತ್ರಜ್ಞರಲ್ಲಿ ಕ್ಲಾರ್ಕನೂ ಒಬ್ಬ.		 (ಎ.ಬಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ